Thursday, August 7, 2014

ಗೊಂದಲ!

ಕಳೆದು ಹೋದ ಜೀವನ ದೋಣಿ
ಸುಳಿಯಲಿ ಸಿಲುಕಿ ತಿರುಗುತಿದೆ
ಅತ್ತಲೋ, ಇತ್ತಲೋ? ತಿಳಿಯದೆ
ಕತ್ತಲಲ್ಲಿ ತುಳುಕಿ ಕೊರಗುತಿದೆ

ಚಂಚಲ ಮನವೇ ಅಂಬಿಗನಾಗಿ
ಬೆದರಿ ಬೆವರಿ ಹುಟ್ಟು ಹಾಕುತ
ಅತ್ತಲೋ, ಇತ್ತಲೋ? ತಿಳಿಯದೆ
ಸುತ್ತಿರುವ ಕತ್ತಲಲ್ಲಿ ತತ್ತರಿಸುತಿದೆ

ದೂರದಲೆಲ್ಲೋ ಬಿದ್ದ ಮಿಂಚೊಂದು
ಪವಾಡದಂತೆ ಗೊಂದಲ ಸುಟ್ಟು
ಅತ್ತಲೋ, ಇತ್ತಲೋ? ತಿಳಿಯದ
ಅಂಧನಿಗೆ ಬೆಳಕಾಗಿ ನಡೆಸಬಾರದೇ?

Monday, July 14, 2014

ಬೇಸಿಗೆ ಮಳೆ!


ಸೊಕ್ಕಿನಿಂದ ಮೆರೆಯುತಿದ್ದ ಸೂರ್ಯನ
ಮೋಡದಲ್ಲಿ ಹಿಡಿದು, ಅಹಂಕಾರ ಮುರಿದು,
ಬಿಸಿಲಿಗೆ ಸೋತು ತಲೆಬಾಗಿದ ಎಲೆಗಳ
ತಂಗಾಳಿ ಬೀಸಿ ಎತ್ತಿ, ಕಣ್ಣೀರನೊರಿಸಿ,
ಮರಳಿದ ತಂಪು ಬೇಸಿಗೆ ಮಳೆಯ ಒಲವಿಗೆ
ನಂತರ ಸುರಿದ ಆನಂದ ಬಾಷ್ಪವೇ ಸಾಕ್ಷಿ!!








Sunday, June 1, 2014

ದ್ವಂದ್ವ - ಡಬ್ಬಲ್ ಮೀನಿಂಗ್

   ಡಬಲ್ ಮೀನಿಂಗ್ ಅಂದ ತಕ್ಷಣ ನಿಮಗೆಲ್ಲಾ ಆವಾಂತರದ ಅನಂತನೋ, ಬಲ್ ನನ್ ಮಗನೋ ನೆನಪಾಗುತ್ತಾನೆ ಅಂದರೆ ನಾನು ಈ ಲೇಖನ ಬರಿಯುತ್ತಿರುವುದು ಸಾರ್ಥಕ. ಏಕೆಂದರೆ ಇದನ್ನ ಓದಿದ ಮೇಲೆ ದ್ವಂದ್ವಾರ್ಥ ವಾಕ್ಯಗಳ ಮೇಲೆ ಇರುವ ನಿಮ್ಮ ಅಭಿಪ್ರಾಯ ಖಂಡಿತವಾಗಿ ಬದಲಾಗುತ್ತದೆ.

   ಈ ತನಕ ನಾವು ಕೇಳಿರುವ ದ್ವಂದ್ವ ವಾಕ್ಯಗಳಲ್ಲಿ ಒಂದು ಅರ್ಥ ಸರಳವಾಗಿ ದೈನಿಕ ಬದುಕಲ್ಲಿ ಬರುವ ಸಂದರ್ಭವನ್ನು ಅನುಸರಿಸುತ್ತದೆ, ಆದರೆ ಇನ್ನೊಂದು ಅಶ್ಲೀಲವಾದ ಅರ್ಥ ಅಡಗಿದ್ದು ಪಡ್ಡೆ ಹುಡುಗರ ಸೀಟಿಗಾಗಿ ಕಾತೊರೆಯುತ್ತಾ ಕೂತಿರುತ್ತದೆ. ಆದರೆ ಒಂದೇ ವಾಕ್ಯದಲ್ಲಿ ಎರಡರ್ಥವಿದ್ದು ಎರಡೂ ಬೇರೆ ಬೇರೆ ಪ್ರಸಂಗಕ್ಕೆ ಸೇರಿದ್ದು ಒಂದು ಚೂರೂ ಅಶ್ಲೀಲತೆ ಇಲ್ಲದೇ ಇರೋ ವಾಕ್ಯಗಳ ಬಗ್ಗೆ ಕೇಳಿದ್ದೀರಾ? ನಮ್ಮ ಆದಿ ಭಾಷೆ ಸಂಸ್ಕೃತದಲ್ಲಿ ನಾನಂತೂ ಎರಡು ತರಹದ ವಾಕ್ಯಗಳನ್ನು ನೋಡಿದ್ದೀನಿ.

   ಮೊದಲನೆಯ ರೀತಿಯಲ್ಲಿ ವಾಕ್ಯದ ಕೆಲವು ಪದಗಳು ಹಲವು ಅರ್ಥಗಳನ್ನು ಹೊಂದಿರುತ್ತದೆ. ಸಂಸ್ಕೃತದಲ್ಲಿ ಇದು ಮಾಮೂಲಿ ಬಿಡಿ. ಪ್ರತಿ ಪದದ ಅರ್ಥ ಬದಲಾಯಿಸಿ ನೋಡಿದಾಗ ಇನ್ನೊಂದು ಅರ್ಥಪೂರ್ಣವಾದ ವಾಕ್ಯ ಸಿಗುತ್ತದೆ. ಸರಿ ಜಾಸ್ತಿ ಕೊಂಕಣ ಸುತ್ತದೆ ನೇರವಾಗಿ ಉದಾಹರಣೆಗೆ ಬರ್ಲಾ?
ಹೀಗೊಂದು ವಾಕ್ಯ ನೋಡಿ - " ಮಾಘೆ ಮೇಘೆ ವಯ ಗತಃ"
ಈ ವಾಕ್ಯದ ಸರಳ ಅರ್ಥ ನೋಡಿದರೆ ಮಾಘ ಮಾಸದಲ್ಲಿ ಮೋಡಗಳ (ಮೇಘ) ಮಧ್ಯದಿಂದ ಹಕ್ಕಿಯೊಂದು (ವಯ) ಹೋಯಿತು ಎಂದಾಗುತ್ತದೆ. ಆದರೆ ಇದರಲ್ಲಿ ಇನ್ನೊಂದು ಅರ್ಥ ಅಡಗಿದೆ. ಮಾಘ ಎಂಬ ಪ್ರಸಿದ್ಧ ಕವಿಯ ಕೃತಿ, ಹಾಗೂ ಕಾಳಿದಾಸನ ಮೇಘಸಂದೇಶ ಕೃತಿಯನ್ನು ಓದುತಿದ್ದರೆ, ವಯಸ್ಸು ಹೋಗಿದ್ದೇ ಗೊತ್ತಾಗುವುದಿಲ್ಲ ಎಂಬ ಸ್ವಾರಸ್ಯಕರವಾದ ಅರ್ಥ ಮೂಡುತ್ತದೆ.

   ಇನ್ನೊಂದು ರೀತಿಯ ದ್ವಂದ್ವಾರ್ಥ ವಾಕ್ಯಗಳು ಮಹಾಭಾರತದಲ್ಲಿ ಬರುತ್ತವೆ. ಇದಕ್ಕೆ ಕೂಟ ಶ್ಲೋಕಗಳೆಂದು ಕರೆಯುತ್ತಾರೆ. ಈ ಸಂಸ್ಕೃತದಲ್ಲಿ ಒಂದು ಪದವನ್ನು ಹೇಗೆ ಬಿಡಿಸುತ್ತೀರೋ ಅದರ ಮೇಲೆ ಅರ್ಥ ಅವಲಂಬಿಸುತ್ತದೆ.  ಉದಾಹರಣೆಗೆ ಈ ಹೆಸರುವಾಸಿ ಕೂಟಶ್ಲೋಕವನ್ನೇ ನೋಡಿ:
"ಕೇಶವಂ ಪತಿತಂ ದೃಷ್ಟ್ವಾ ಪಾಂಡವಾಹ ಹರ್ಷಮಾಯಹಃ |
 ರುರುದಃ ಕೌರವಾ ಸರ್ವೇ ಹಾ ಹಾ ಕೇಶವಾ ಕೇಶವಾ || "

ಇದರ ನೇರ ಅರ್ಥ ನೋಡಿದರೆ ಎಲ್ಲಾ ತಿರುಗಮುರುಗ ಎನಿಸುತ್ತದೆ. ಕೇಶವನನ್ನು ಬಿದ್ದಿದ್ದು ನೋಡಿ ಪಾಂಡವರು ಹರ್ಷಗೊಂಡರು, ಕೌರವರು ಅಳುತ್ತ ಅಯ್ಯೋ ಕೇಶವ ಕೇಶವ ಎಂದರು ಎನ್ನುತ್ತದೆ. ಇಲ್ಲಿ ಏನಪ್ಪಾ ಸಂಚು ಅಂದರೆ ಕೇಶವ ಎಂಬ ಪದವನ್ನು ಬಿಡಿಸಿದರೆ ಕೇ-ಶವ ಅಂದರೆ ನೀರಲ್ಲಿ ಶವ ಎಂದು ಆಗುತ್ತದೆ. ಪಾಂಡವಃ ಎಂದರೆ ಬಕ ಪಕ್ಷಿ ಎಂದು ಅರ್ಥವಿದೆಯಂತೆ. ಕೌರವ ಎಂದರೆ ಕಾಗೆ ಎಂದು ಅರ್ಥವಾಗುತ್ತದೆ, ಕಾ ಕಾ ಎಂದು ರವ ಮಾಡುವ ಪಕ್ಷಿ. ಹೀಗಾಗಿ ನೀರಿನಲ್ಲಿ ಬಿದ್ದ ಹೆಣವನ್ನು ನೋಡಿ  ನೀರಲ್ಲೇ ಇದ್ದ ಬಕ ಪಕ್ಷಿಗಳು ಹರ್ಷಗೊಂಡವು ಆದರೆ ದೂರದಲ್ಲಿ ಕಾಗೆಗಳು ನಿರಾಶೆಗೊಂಡು ಅಯಯ್ಯೋ ನೀರು ಪಾಲಯಿತಲ್ಲಾ ಎಂದು ಅತ್ತವು.

ಎಷ್ಟು ಸ್ವಾರಸ್ಯಕರ ಅನಿಸುತ್ತದೆಯಲ್ಲವೇ?! ಇದು ಪ್ರತಿಭೆಯೆಂದರೆ! ಬರೀ ಪದಗಳ ಅರ್ಥವನ್ನೇ ಬದಲಾಯಿಸಿ ಹೇಗೆ ಕಥೆಯೇ ಬೇರೆಯಾಗುತ್ತದೆ ನೋಡಿ. ಈಗ ಹೇಳಿ ಡಬಲ್ ಮೀನಿಂಗ್ ಅಂದರೆ ಛೀ ಅನಿಸುತ್ತಾ? ಡಬಲ್ ಮೀನಿಂಗಿಗು ಒಂದು ಮೀನಿಂಗ್ ಬಂತು ಎಂದು ಖುಷಿ ಪಡುತ್ತೀರ ಅಂತ ಊಹಿಸಿ ಬರಹರವಾನೆ ಮುಗಿಸುತ್ತೇನೆ..ಅ..ಅಂದರೆ..ಬರಹ ರವಾನೆ ಮುಗಿಸುತ್ತೇನೆ! :P

Thursday, March 27, 2014

ಸಾಕ್ಷಾತ್ಕಾರ!

ಯಾವುದು ಹಗಲೋ ಯಾವುದು ಇರುಳೋ,
ಮೋಹದ ಮಾಯೇಲಿ ತಾ ಸದಾ ಮರುಳೋ..
ಬೇಕೆಂಬ ಬಯಕೇಲಿ ಓಡುತಿಹ ಓಟಗಾರನಿಗೋ
ಸಾಕೆಂಬ ಸೋಲು ಸಿಗುವುದೇ ಸಾಕ್ಷಾತ್ಕಾರ...

Sunday, February 16, 2014

'ಕವಿ'ತೆ






ಖಾಲಿ ಹಾಳೆಯ ಬಾಳಿಗೆ
ಬಣ್ಣ ತುಂಬಿದ ಕಲಾವಿದೆ
ನಿನ್ನ ಕುಂಚದ ತುದಿಯಲಿ ತೇಲಿ ಬಣ್ಣಿಸುವ ಕವಿಯಾದೆ

ನೀಲ ಗಗನದ ನಯನ
ಶುಭ್ರ ಮೋಡದ ಮನಸು
ಪಡುವಣ ರವಿಯ ಕೆಂಗಿರಣ ಮೊಗದಲಿ ಹೊಳೆಯುತಿದೆ

ಮುಗಿಯದ ಮಾತಿನ ಸಾಗರದಲಿ
ಮೂಡುವ ನಗೆಯ ಅಲೆಗಳು
ತೀರದಲಿ ನಿಂತ ಮನವ ಮುಟ್ಟಿ ಮರಳು ಮಾಡಿವೆ
 
ಬರೀ ಬಂಡೆಯ ಮೌನ ನಾ
ನೀ ತಾಡುವ ನೀರ ಗಾನ
ಹಗಲಿರುಳು  ಕೊರೆದು ಬರೆದ ರೂಪವೇ ಪ್ರೀತಿ.