Sunday, June 17, 2012

ಚಿನಕುರುಳಿ ಕಥೆಗಳು

೧.      ಅವನು ತಾನು ಆಫೀಸ್ ಬಿಟ್ಟು ಮನೆ ಸೇರಿದ ಮೇಲೆಯೇ ನೋಡಿದ್ದು ಮನೆಯ ಬೀಗದ ಕೈ ಮನೆಯೊಳಗೇ ಬಿಟ್ಟು ಹೋಗಿದ್ದ ಎಂದು. ಇನ್ನು ತನ್ನ ಗೆಳಯ ಆಫೀಸಿಂದ ಬರುವ ತನಕ ಹೊರಗೆ ಕಾಯಬೇಕಲ್ಲ ಎಂದು ಮುಖ ಸಿಂಡರಿಸಿಕೊಂಡ. ಛೆ! ಸುಮ್ಮನೆ ಕಾಲಹರಣ! ಅವನಿಗೆ ಕರೆ ಮಾಡಿ ಕೇಳಿದರೆ ಒಂದು ಘಂಟೆಯಾಗಬಹುದು ಅಂದನಲ್ಲ. ಸಾಯಿಲಿ ಇನ್ನೇನು ಮಾಡುವುದು ಅಂತ ಮನೆಯ ತಾರಸಿಯ ಮೇಲಿದ್ದ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬೆನ್ನೂರಿ ಆಕಾಶ ನೋಡ ತೊಡಗಿದ. ಅನಂತ ಆಕಾಶದಲ್ಲಿ ಪಸರಸಿರುವ ಸಮಸ್ತ ತಾರಗಣಗಳು, ಮುಖವನ್ನು ಸವರಿ ಕಿವಿಯಲ್ಲಿ ಪಿಸುಗುಡುತ್ತಿರುವ  ತಣ್ಣನೆಯ ಗಾಳಿ, ತಂಪಾದ ಬೆಳದಿಂಗಳ ಸೂಸುತ್ತಿರುವ ಹುಣ್ಣಿಮೆ ಚಂದ್ರಮ, ದೂರದಲೆಲ್ಲೋ ಖುಷಿ ಖುಷಿಯಾಗಿ ಆಡುತ್ತಿರುವ ಮಕ್ಕಳ ದನಿ ಬೇರೆಯೇ ಲೋಕವೊಂದಕ್ಕೆ ಬಾಗಿಲು ತೆರೆಯಿತು. ತನ್ನ ಬದುಕಲ್ಲಿ ಆಗುತ್ತಿರುವ ಒಂದೊಂದು ಒಳ್ಳೆಯ ಘಟನೆಗಳು, ದೈನಂದಿನ ಜೀವನದಲ್ಲಿ ಸಿಗೋ ಪ್ರತಿಯೊಂದು ಚಿಕ್ಕ ಚಿಕ್ಕ ಆನಂದವು ನೆನಪಾಗಿ ಒಂದು ಧನ್ಯತೆ ಮೂಡಿತು. ಎಷ್ಟು ಕಾಲ ಕಳೆಯಿತೋ ಗೊತ್ತಿಲ್ಲ ಕೆನ್ನೆ ಮೇಲೆ ಸುರಿಯುತ್ತಿರುವ ನೀರಿನ ಹನಿಯಿಂದ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡಿದಾಗ ಮೋಡ ತುಂಬಿತ್ತು. ಕೆನ್ನೆ ಮೇಲೆ ಉರುಳಿದ್ದು ಮಳೆ ಹನಿಯೋ ಕಂಬನಿಯೋ ತಿಳಿಯಲಿಲ್ಲ...ಆದರೆ ಎಷ್ಟೋ ದಿನ ಆದಮೇಲೆ ಮನಸ್ಸಿಗೆ ಒಂದು ನೆಮ್ಮದಿ ಸಿಕ್ಕಿತ್ತು...ಕೇವಲ ಒಂದು ಬೀಗದ ಕೈ ಬಿಟ್ಟು ಹೋದ ಕಾರಣ!!!


೨.      ಇನ್ನು ನಾನು ತಾಳಲಾರೆ.ಇವತ್ತಿಗೆ ಸರಿಯಾಗಿ ಹದಿನೈದು ದಿನಗಳಾದವು. ಅವಳಿಂದ ಏನೂ ಸುದ್ಧಿ ಇಲ್ಲ. ನನ್ನ ಒಂದು ಮೆಸೇಜ್ ಗು ಉತ್ತರ ಇಲ್ಲ. ಒಂದು ಕರೆಯೂ ಇಲ್ಲ!! ಅಲ್ಲ ಅಂತಹ ತಪ್ಪೇನು ಮಾಡಿದೆ ನಾನು. ನಾವು ಗೆಳೆಯರು ಅಷ್ಟೇ ತಾನೇ ಇನ್ನೇನು ಅಲ್ಲ ಅಲ್ವ ಅಂತ ಮಾತ್ರ ತಾನೇ ಕೇಳಿದ್ದು. ಅದಕ್ಕೆ ಮಾತನ್ನೇ ಬಿಡುವುದ. ಈ ಹುಡುಗಿಯರೇ ಇಷ್ಟು. ಸಹಾಯ ಬೇಕಾದಾಗ ಮಾತ್ರ ಬರುತ್ತಾರೆ. ಹಾಗಾದರೆ ಇಷ್ಟು ದಿನ ನಮ್ಮ ಮಧ್ಯ ಇದ್ದುದ್ದಕ್ಕೆ ಏನೂ ಬೆಲೆಯೇ ಇಲ್ವಾ?! ಛೆ ಸ್ವಾರ್ಥಿಗಳು!! ಬಹಳ ಖಿನ್ನಗೊಂಡ. ಆಗಲೇ ಒಂದು ಬೀಪ್ ಕೇಳಿತು. ಮೊಬೈಲ್ ಎತ್ತಿಕೊಂಡ. ಹೊಸ ಮೆಸೇಜ್ ಬಂದಿತ್ತು. "ಹೇ ನಮ್ಮಜ್ಜ ತೀರಿಕೊಂಡರು. ಹಟಾತ್ತನೆ ಊರಿಗೆ ಹೋಗಬೇಕಾಯಿತು. ನಾನು ಗಡಿಬಿಡಿಯಲ್ಲಿ ಮೊಬೈಲ್ ಇಲ್ಲೇ ಬಿಟ್ಟು ಹೋದೆ. ಅಜ್ಜಿಗೆ ನಮ್ಮಮ್ಮ ಒಬ್ಬರೇ ಮಗಳು.ಹಾಗಾಗಿ ನಾವು ಅಲ್ಲೇ ಇರಬೇಕಾಯಿತು. ನನಗೂ ದುಃಖ ಹಂಚಿಕೊಳ್ಳಲು ಯಾರು ಸಿಗಲಿಲ್ಲ. ನಿನ್ನ ತುಂಬಾ ಮಿಸ್ ಮಾಡಿಕೊಂಡೆ ಕಣೋ" ಇದನ್ನು ಓದಿ ಮುಗಿಸುತ್ತಿದ್ದಂತೆ ಇವನಿಗೆ ಸ್ವರ್ಗಕ್ಕೆ ಮೂರೇ ಗೇಣು!!!


೩.        ಇವನು ಇನ್ನುಳಿದವರಂತೆ ಸಾಫ್ಟ್ವೇರ್ ಇಂಜಿನಿಯರ್. ಯಾವುದೋ ಒಂದು ಊರಲ್ಲಿ ಓದಿ ಬೆಂಗಳೂರಿನಲ್ಲಿ ಕೆಲಸ ಹುಡುಕಿಕೊಂಡಿದ್ದ. ಚೆನ್ನಾಗಿ ಸಂಬಳ ಬರುತಿತ್ತು. ಆದರೆ ತನ್ನವರಿಂದ ದೂರವಿದ್ದ. ಯಾರು ಗೆಳೆಯರು ಇರಲಿಲ್ಲ. ನಗರದಿಂದ ಸ್ವಲ್ಪ ದೂರದಲ್ಲಿ ಒಂದು ಸಿಂಗಲ್ ರೂಮ್ ಮನೆ ಮಾಡಿಕೊಂಡಿದ್ದ. ಅದೇ ಬೀದಿಯಲ್ಲಿ ಎಲ್ಲಾ ಮನೆಯಿಂದ ಸ್ವಲ್ಪ ದೂರದಲ್ಲಿ ಒಂದು ಪುಟ್ಟ ಗುಡಿಸಲಿತ್ತು. ಅದರೊಳಗೆ ಒಬ್ಬ ಮಧ್ಯವಯಸ್ಕ ವಾಸ ಮಾಡಿಕೊಂಡಿದ್ದ. ಅರ್ಧ ಕಪ್ಪು ಕುರುಚಲು ಗಡ್ಡ ಬಿಟ್ಟುಕೊಂಡು, ಕೊಳೆಯಾಗಿ ನಾರುತ್ತಿರುವ ಬಟ್ಟೆ ಧರಿಸಿಕೊಂಡು, ನೋಡಿದರೆ ಸ್ನಾನ ಮಾಡಿ ವರ್ಷಗಳೇ ಕಳೆದಂತಿದ್ದ! ಇವನು ಕೆಲಸದಿಂದ ಮರಳುವಾಗ ಆ ಗುಡಿಸಲನ್ನು ಸಾಗಿ ಬರಬೇಕಿತ್ತು. ಪ್ರತಿ ದಿನ ಅವನನ್ನು ನೋಡಿ ಅಸಹ್ಯ ಪಡುತಿದ್ದ.ಇಂಥವರು ಭೂಮಿಗೆ ಭಾರ, ಇನ್ನು ಯಾಕೆ ಬದುಕಿದ್ದಾನೋ ಎಂದು ಅನಿಸುತಿತ್ತು. ಆದರೆ ಅದೊಂದು ದಿನ ಇವನು ಆ ಗುಡಿಸಲ ಬಳಿ ನಡಿಯುತಿದ್ದಾಗ ಅರ್ಧ ತೆಗೆದ ಬಾಗಿಲಿಂದ. ಆ ಮನುಷ್ಯ ನಗುವುದು ಕೇಳಿಸಿತು. ಇಣುಕಿ ನೋಡಿದಾಗ ಚಿಕ್ಕ ಹಣತೆಯ ಬೆಳಕಿನಲ್ಲಿ ನೆಮ್ಮದಿಯಲ್ಲಿದಂತೆ ಕಾಣಿಸಿತು ಅವನು ಮುಖ.ಎರಡೇ ಎರಡು ಇಡ್ಲಿ ಇದ್ದ ಒಂದು ಬಾಳೆಲೆ ತನ್ನ ಕೈಯಲ್ಲಿ ಹಿಡಿದು ಒಂದು ತುಂಡು ತಾನು ತಿನ್ನುವುದು ಇನ್ನೊಂದು ತುಂಡು ಅಲ್ಲೇ ಇದ್ದ ನಾಯಿಗೆ ತಿನ್ನಿಸುವುದು ಮಾಡುತಿದ್ದ. ಆ ನಾಯಿಯು ಆ ಮನುಷ್ಯನು ವರ್ಷಗಟ್ಟಲೆಯಿಂದ ಜೊತೆಗೆ ಇದ್ದ ಸ್ನೇಹಿತರಂತೆ ಕಾಣುತಿದ್ದರು. ನಾಯಿ ಮೇಲೆ ಆ ಮನುಷ್ಯನಿಗಿದ್ದ ಮಮತೆ ಹಾಗು ನಾಯಿಗೆ ಅವನ ಮೇಲೆ ಇದ್ದ ಪ್ರೀತಿ ನೋಡಿ ಚಕಿತನಾಗಿ ಮನೆಗೆ ಬಂದ. ಮನೆಯಲ್ಲಿ ಕರೆಂಟು ಹೋಗಿತ್ತು. ಕತ್ತಲೆ ಮನೆಯೊಳಗೆ ನಡೆದ. ತುಂಬಾ ದಣಿದಿದ್ದ ಅವನಿಗೆ ನೀರು ಕೊಡುವವರು ಇರಲಿಲ್ಲ. ಅಡಿಗೆ ಮನೆಗೆ ಹೋಗಿ ಮೇಣದ ಬತ್ತಿ ಹಚ್ಚುತಿದ್ದಂತೆ ಬಂತು ಒಂದು ಯೋಚನೆ. ನನಗೆ ಎಲ್ಲಾ ಇದ್ದು ಯಾರು ಇಲ್ಲದಂತೆ ಅನಿಸುತ್ತಿದೆ. ಅದೇ ಆ ಮನುಷ್ಯನಿಗೆ ಏನು ಇಲ್ಲದಿದ್ದರೂ ಎಷ್ಟು ನೆಮ್ಮದಿ ಇದೆ. ಒಂದು ಮುಗುಳ್ನಗೆ ಬೀರುತ್ತ ಜೋರಾಗಿ ಹೇಳಿದ "ಯಾರು ಬಡವರು... ಯಾರು ಶ್ರೀಮಂತರು... ಎಲ್ಲಾ ಅವನಿಚ್ಚೆ, ಅವನಾಟ"