Sunday, December 12, 2010

   ಇದು ನನ್ನ ಮೊದಲ ಬ್ಲಾಗ್ ಪೋಸ್ಟ್. ಏನು ಬರೀಬೇಕು ಅಂತ ಯೋಚನೆ ಮಾಡಿ ಮಾಡಿ ತಲೆ ಚಿಟ್ಟು ಹಿಡಿದಂಗೆ ಆಗಿ, ಸರಿ.. ಏನೋ ಒಂದು! ಬರಿಯೋಣ ಅಂತ ಬಲಗೈ ಮುಂದೆತ್ತಿ ಶುರು ಮಾಡುತಿದ್ದೇನೆ...



  ಮೊನ್ನೆ ಮೊನ್ನೆ ನಾವೆಲ್ಲಾ ನಮ್ಮ ಸಿ.ಇ.ಟಿ. ಮುಗಿಸಿ PESITಗೆ ಬಂದು ಸೇರಿದಂತಿದೆ. ಇನ್ನೆರಡೇ ಎರಡು ದಿನ ಎಲ್ಲಾ ಮುಗಿಸಿ ಒಬ್ಬರನ್ನ ಒಬ್ಬರು ಬಿಟ್ಟು ದೂರ ಹೋಗ್ತಾ ಇದ್ದೀವಿ. ಈ ನಾಲ್ಕು ವರುಷ ಕಳೆದದ್ದೇ ಗೊತ್ತಾಗಿಲ್ಲ .ಇನ್ನೇನು ಎಲ್ಲರನ್ನು ಅರ್ಥ ಮಾಡ್ಕೊಂಡು ಅನೋನ್ಯವಾಗಿ ಇರಬೇಕು ಅಷ್ಟರಲ್ಲಿ ದೂರ ಆಗ್ತಾ ಇದ್ದೀವಿ!

 ಗೆಳೆಯರು ಅಂದ್ರೆ ನಮ್ಮ ಮನೆಯವರಿಗಿಂತನೂ ಹೆಚ್ಚಾಗಿದ್ರು.ಎಷ್ಟೋ ವಿಷಯ ನಾನು ನಮಪ್ಪ ಅಮ್ಮಂಗೂ ಹೇಳದೆ ಇವರ ಜೊತೆ ಹಂಚಿಕೊಂಡಿದ್ದೆ. ನಮ್ಮ ಮನೆಯಲ್ಲಿ ಕಷ್ಟ ಇದ್ದಾಗನೂ ಇವರ ಜೊತೆ ಚರ್ಚೆ ಮಾಡಿ ಅಮ್ಮಂಗೆ ಧೈರ್ಯ ಹೇಳಿದ್ದೂ ಉಂಟು .

 ನಮ್ಮ ಮೊದಲ ವರ್ಷ ಎಲ್ಲರೂ ಒಂದೇ  ಡಾರ್ಮೆಟರಿಯಲ್ಲಿ ಇದ್ದೆವು . ಆ ವರ್ಷ ಮಾಡಿದ ಮಜ ಅಂತೂ ಲೆಕ್ಕವೇ ಇಲ್ಲ. ಕ್ರಿಕೆಟ್ ಆಡಿ ಟ್ಯೂಬ್ಲೈಟ್ ಒಡೆದಿದ್ದು, ಪರೀಕ್ಷೆ ಸಮಯದಲ್ಲಿ ಜಾಗರಣೆ ಮಾಡಿದ್ದು, ಸೆಕ್ಯೂರಿಟಿ ಗಾರ್ಡ್ಸ್ಗೆ ಚಳ್ಳೆ ಹಣ್ಣು ತಿನ್ಸಿದ್ದು ಯಾವುದು ಮರೆಯುವುದು ಸಾಧ್ಯವೇ ಇಲ್ಲ.ನಮ್ಮ ತರ್ಕಗಳು,ಚರ್ಚೆಗಳು,ವಿಚಾರ ವಿನಿಮಯಗಳಿಗಂತೂ ಲೆಕ್ಕನೇ ಇಲ್ಲ.

 ಎರಡನೇ ವರ್ಷ ಅಂತು ಕೌಂಟರ್ ಸ್ಟ್ರೈಕು ಹುಚ್ಚು. ಹಾಗು IT-Blockನ ಪ್ರಥಮ ಅನುಭವ. ಗ್ರೌಂಡ್ ಫ್ಫ್ಲೋರಿನಲ್ಲಿ ಇದ್ದಾಗ ಅನುಭವವೇ ಬೇರೆ.ಮಳೆ ಬಂದಾಗ ಕೆಳಗಡೆ ನೀರು ತುಂಬಿಕೊಳ್ಳುತ್ತಿತ್ತು.ರಾತ್ರಿ  ಇಲಿ ಕಾಟ ಬೇರೆ. ಒಂದು ದಿನ ಕಪ್ಪೆ ಹಿಡಿದು ಅಮರಣ್ಣನ ಕಾಡಿಸಿದ್ದಂತು ಮರೆಯಲು ಸಾಧ್ಯನೇ ಇಲ್ಲ. ನಾವು ಮತ್ತು ನಮ್ಮ ಒಗ್ಗಟ್ಟು ಇಡೀ IT-Block ಅಲ್ಲೇ ಪ್ರಸಿದ್ದವಾಗಿತ್ತು. ನಮ್ಮ ಪ್ರಿಯ ವಾರ್ಡನ್ ಸಾಹೇಬ್ರು ಬೇಕಾಬಿಟ್ಟಿ ಹೊಸ ಹೊಸ "ರೂಲ್ಸ್" ಮಾಡಿದ್ದಾಗ ನಾವೇ ಪ್ರಿನ್ಸಿಪಾಲ್ ಮಹಾಶಯರಿಗೆ ಪತ್ರ ಬರೆದು ವಾರ್ಡನ್ ಬಾಯಿ ಮುಚ್ಚಿಸಿದ ನಾಯಕರಾಗಿದ್ದೆವು.

ಮೂರನೇ ವರ್ಷ ಅಂತೂ ಎಲ್ಲರ ಕೈಗೆ ಲ್ಯಾಪ್ಟಾಪ್ ಬಂದಿತ್ತು.ನಾವು ಸ್ವಲ್ಪ ದೂರ ಹೋದಂಗೆ ಅನಿಸಿದ್ದ್ರು ಊಟಕ್ಕೆ ತಿಂಡಿಗೆ ಎಲ್ಲ ಒಟ್ಟಿಗೆ ಹೋಗೋದು ಮಾತ್ರ ಬಿಟ್ಟಿರಲಿಲ್ಲ. ನಮ್ಮ ಒಗ್ಗಟ್ಟು, ಬೇರೆಯವರು  ನೋಡಿ ಹೊಟ್ಟೆಕಿಚ್ಚು ಪಡುವಂತ್ತಿತ್ತು.ನಮಗೆ ಉಸಿರಾಟದಷ್ಟೇ ಮುಖ್ಯವಾಗಿದ್ದ ರೇಗ್ಸೋ/ಮಕ್ಕರ್ ಮಾಡೋ ಬುದ್ಧಿ ಬಿಟ್ಟಿರಲಿಲ್ಲ.

ಕೊನೆಯ ವರ್ಷ ಅಂತು ನಾವೇ ಹಿರಿಯರು.ನಮ್ಮ ಗುಂಪಿಗೆ ಬಿ.ಕೆ. ಯ ಸೇರ್ಪಡೆಯು ಆಗಿತ್ತು.ನಮ್ಮನ್ನ ಹೇಳೋವ್ರು ಕೇಳೋವ್ರು ಯಾರಿದ್ದರು? ಅದಲ್ಲದೆ ಎಲ್ಲರೂ ಒಬ್ಬೊಬ್ಬರೆ (ಸಿಂಗಲ್ ರೂಮಿನಲ್ಲಿ) ಇದ್ದೆವು. ಕಾಲೇಜಿನ ವೈಫೈ ನಮೆಲ್ಲರಿಗೂ ಸಿಗುತ್ತಿತ್ತು. ನಮ್ಮ ಹಣೆ ಮೇಲೆ ಒಳ್ಳೇ ಹುಡುಗ್ರು ಅನ್ನೋ ಪಟ್ಟಿ ಬೇರೆ ಬಂದಿತ್ತು. ಕೆಲಸ ಸಿಕ್ಕೋ ಸೀಸನ್ ಬೇರೆ. ಎಲ್ಲರಿಗೂ ಕೆಲಸ ಸಿಗ್ತ ಇದ್ದಂಗೆ ಟ್ರೀಟ್ ಅಂತ ಸರೀ ತಿನ್ನೋದು ಮಾಮೂಲಿ ಆಗಿಬಿಟ್ಟಿತ್ತು.ನಮ್ಮಲ್ಲಿ ಒಬ್ಬ ಗೆಳೆಯ ಮಾತ್ರ ದುರಾದೃಷ್ಟವಶಾತ್ ಕೊನೆಯ ವರ್ಷದಲ್ಲಿ ಇರಲಿಲ್ಲ ಅನ್ನೋ ಒಂದೇ ಒಂದು ಕೊರತೆ ಇತ್ತು. ಆದರೆ ಅವನಿಗೆ ನಾನೂ ಹಾಗು ಉತ್ತಮ್ ನಡೆದ ಪ್ರತಿಯೊಂದು ಘಟನೆಯನ್ನು ಟೀವಿ9 ವಾರ್ಥಾವಾಹಿನಿಯಂತೆ ವಿವರಿಸಿ ಅವನೂ ಹೀಗೂ ಉಂಟೆ ಎಂದು ಯೋಚಿಸೋ ಹಾಗೆ ಮಾಡುತಿದ್ದೆವು.ನಾವು ಕೇರಳ ಪ್ರವಾಸದಲ್ಲಿ ಪಟ್ಟ ಮಜಾ ಸಿಕ್ಕ ಅನುಭವ ಮರೆಯಲಸಾಧ್ಯ.

ನಮ್ಮನಮ್ಮಲ್ಲಿ ಒಂದೊಂದು ಅಸಮಧಾನ ಮೂಡಿದರೂ ಅದನ್ನು ಮರೆತು ಒಂದಾಗುತಿದ್ದೆವು.ಆಮೇಲೆ ಅದನ್ನ ಹೇಳಿ ನಗುತಿದ್ದೆವು.ನಾವು ಎಂಥ ಕೆಟ್ಟ ಅನುಭವಗಳ ಮಧ್ಯದಲ್ಲೂ ಆಡ್ಕೊಂಡು ನಗುತಿದ್ದೆವು.ಎಲ್ಲಾ ಕಳೆಯಿತು. ಪ್ರಾಜೆಕ್ಟ್ ಆಯಿತು. ಇಂಜಿನಿಯರಿಂಗ್ ಮುಗಿತು.ಎಲ್ಲರೂ ದೂರ ಆಗುತ್ತಾರೆ.ಬರಿ ಬೇಜಾರು.ಆದರು ಏನೇ ಆಗಿ ನಾವೆಷ್ಟೇ ದೂರವಾದರೂ ನನ್ನ ಪ್ರೀತಿಯ ಗೆಳೆಯರೇ ಹಿಂದೆ ಮಾತಾಡಿಕೊಂಡಂತೆ ಉತ್ತಮ್ ಮದುವೆಗೆ ಖಂಡಿತ ಬರೋಣ ;-)