Friday, February 25, 2011

ನಾನು ಮತ್ತು ಬುಸಪ್ಪಾ...

   ಈ ಹಳ್ಳಿ ಮನೆಗಳಲೆಲ್ಲ ಏನಾದರು ಕಾರ್ಯಕ್ರಮ ಹಬ್ಬ ಇತ್ಯಾದಿ ಇದ್ದಾಗ ಅತ್ತೆ ಮಕ್ಕಳು, ಮಾವನ ಮಕ್ಕಳು, ದೊಡಪ್ಪ ಚಿಕಪ್ಪನ್ ಮಕ್ಕಳು ಸೇರಿರುತ್ತಾರೆ. ಆ ಗೌಜಿನ ಮಧ್ಯ ಹಿರಿಯರ ಬುದ್ಧಿವಾದ ಬೈಗುಳ ಸರ್ವೇ ಸಾಮಾನ್ಯ. ಆದರೆ ತಮ್ಮ ಮಕ್ಕಳಲ್ಲದವರಿಗೆ ಮುಖಕ್ಕೆ ಹೊಡೆದಂತೆ ಬಯ್ಯುವುದು ಸರಿಯಲ್ಲ ತಾನೇ? ಅಂತ ಯೋಚಿಸಿ ಅಂತ ಪರಿಸ್ಥಿತಿ ಬಂದಾಗ ಪರೋಕ್ಷವಾಗಿ ಗಾದೆಗಳ ಮೂಲಕ ಬುದ್ಧಿ ಹೇಳುವುದು ಉಂಟು. ನನಗಂತೂ ಅಂತ ಅನುಭವ ಆಗಿಯೇ ಗಾದೆಗಳ ಬಗ್ಗೆ ಸುಮ್ಮಾರು ತಿಳುವಳಿಕೆ ಬಂದಿದೆ.

   ಗಾದೆಗಳ ಸ್ವಾರಸ್ಯ ಹಾಗು ಸೂಕ್ಷ್ಮ ಎಲ್ಲರಿಗೂ ಅರ್ಥ ಆಗುವಂತಿದಿದ್ದರೆ ಬಹುಶಃ ಅದರ ಬಳಕೆ ಅಷ್ತಾಗುತಿರಲಿಲ್ಲ ಅನಿಸುತ್ತೆ.ಹೆಚ್ಚಾಗಿ ಆಗುವುದಿಷ್ಟೇ, ಅದೇನೋ ಹೇಳ್ತಾರಲ್ಲ ಅಂತ ಶುರು ಮಾಡಿ ಒಂದ್ ಗಾದೆ ಒಬ್ಬ ಬುದ್ಧಿವಂತ ಅಂತ ಅನಿಸಿಕೊಂಡವರು ಹೇಳಿಬಿಡ್ತಾರೆ. ಅದು ಯಾರಿಗೆ ಅನುವಯಿಸಬೇಕೋ ಅವನಿಗೊಬ್ಬನಿಗೆ ಬಿಟ್ಟು ಇನ್ನೆಲ್ಲರಿಗೂ ಅರ್ಥ ಆಗಿ ದೊಡ್ಡ ಹಾಸ್ಯ ಆಗಿ ಬಿಡುತ್ತದೆ. ಪಾಪ ಹೇಳಿಸಿಕೊಂಡವನು ಮಾತ್ರ ಕಕ್ಕಾಬಿಕ್ಕಿಯಾಗಿ ಇಂಗು ತಿಂದ ಮಂಗನ ಮುಖ ಮಾಡಿಕೊಂಡು ನೋಡುವಂತಾಗುತ್ತದೆ.

   ಒಂದು ಸಲ ನಮ್ಮೂರಲ್ಲಿರೋ ಮನೇಲಿ ಒಂದು ಕಾರ್ಯಕ್ರಮ ನಿಗದಿ ಆಗಿತ್ತು. ಕಾರ್ಯಕ್ರಮದ ಹಿಂದಿನ ರಾತ್ರಿ ಹೀಗೆ ಒಂದು ಇಬ್ಬರು ಮೂವರು ಮಕ್ಕಳು ಅಜ್ಜಿ ಜೊತೆ ಕುಳಿತು ಕೊಟ್ಟೆ ಶಡಿಯುತ್ತಿದ್ದೆವು. (ಕೊಟ್ಟೆ ಶಡಿಯುವುದಂದರೆ ಹಲಸಿನ ಎಲೆಗಳನ್ನು ಒಟ್ಟಿಗೆ ಸೇರಿಸಿ ಚಿಕ್ಕ ಚಿಕ್ಕ ಕಡ್ಡಿ ಚುಚ್ಚಿ ಚೌಕ ಆಕಾರ ಕೊಡುವುದು. ಅದರೊಳಗೆ ಇಡ್ಲಿ ಹಿಟನ್ನು ಹಾಕಿ ಕಡುಬು ಮಾಡುತ್ತಾರೆ. ಕರಾವಳಿ ಕರ್ನಾಟಕದಲ್ಲಿ ಇದು ಸಾಮಾನ್ಯ) ಅಜ್ಜಿ ಎಂಬತ್ತರ ವಯಸ್ಸಿನವರಾದರೂ, ಅವರ ಕೈಗಳು ಹದಿನಾರರ ಚುರುಕನ್ನು ತೋರಿಸುತ್ತಿದ್ದವು. ನಾನು ಹಾಗು ಅಜ್ಜಿ ತಯಾರಾದ ಕೊಟ್ಟೆಗಳನ್ನ ಒಂದು ಬುಟ್ಟಿಯಲ್ಲಿ ಹಾಕಿದ್ದೆವು. ಇನ್ನಿಬ್ಬರು ಇನ್ನೊಂದು ಬುಟ್ಟಿಯೊಳಗೆ ಹಾಕುತಿದ್ದರು. ನಾನು ಹಾಗು ಅಜ್ಜಿ ಹಾಕಿದ್ದ ಬುಟ್ಟಿಯಲ್ಲಿ ಐದು ಪಟ್ಟು ಜಾಸ್ತಿ ಕೊಟ್ಟೆ ಇದ್ದವು.ಕೆಲಸ ಎಲ್ಲಾ ಮುಗಿದ ಮೇಲೆ ನಾನು ಇನ್ನಿಬ್ಬರನ್ನು ಕುರಿತು ಹೇಳಿದೆ ನೋಡಿ ನಾನು ಮತ್ತು ಅಜ್ಜಿ ಸೇರಿ ಇಷ್ಟು ಮಾಡಿದ್ದೀವಿ ಅಂತ. ಆಗ ಅಜ್ಜಿ ಒಂದು ಸಣ್ಣ ಕಳ್ಳ ನಗೆ ಬೀರುತ್ತ "ಇದೊಳ್ಳೆ ಎರೆಹುಳ ನಾನು ಮತ್ತು ಬುಸ್ಸಪ್ಪ ಅಂದಂಗಾಯಿತು" ಎಂದು ನನ್ನ ಬೆನ್ನ ಮೇಲೆ ಒಂದು ತಟ್ಟಿ ಎದ್ದು ಹೋದರು.
 
   ಅಲ್ಲೇ ಇದ್ದ ದೊಡ್ಡವರೆಲ್ಲ ನಕ್ಕರು. ನಾನು ತಾರಾಮಂಡಲ ನೋಡುತ್ತ ನಿಂತಿದ್ದೆ. ನನ್ನ ಮರ್ಯಾದೆ ಹರಾಜು ಆಯಿತು ಅನ್ನೋದು ಒಂದು ಗೊತ್ತಾಯಿತಷ್ಟೇ. ಇಂತ ಸನ್ನಿವೇಶ ಬಂದಾಗ ಒಬ್ಬರೇ ಆಸರೆ... ಅಮ್ಮ. ಅಮ್ಮ ನೋಡು ಅಜ್ಜಿ ಹೀಗಂದರು ನನಗೇನು ಗೊತ್ತಾಗ್ಲಿಲ್ಲ ಅಂತ ಹರಳೆಣ್ಣೆ ಕುಡಿದವನ ಮುಖದಂತೆ ಮುಖ ಮಾಡಿಕೊಂಡು ಗೋಗರೆದೆ.ಅಮ್ಮ ಆಗ ಆ ಗಾದೆಯನ್ನು ವಿವರಿಸಿದರು.

   ಒಮ್ಮೆ ಒಂದು ಎರೆ ಹುಳ ಮತ್ತು ನಾಗರಹಾವು ಗೆಳೆಯರಾಗಿದ್ದವು. ಎಲ್ಲೇ ಹೋದರೂ ಏನೇ ಮಾಡಿದರೂ ಜೊತೆಯಲ್ಲೇ ಇರುತ್ತಿದ್ದವು. ಹೀಗೆ ಒಮ್ಮೆ ಎಲ್ಲೋ ಹೋಗುತ್ತಿದ್ದಾಗ ಒಬ್ಬ ಮನುಷ್ಯ ಏನೋ ತೊಂದರೆ ಕೊಟ್ಟ. ಸಿಟ್ಟು ನೆತ್ತಿಗೇರಿ ಎರೆಹುಳ ಅವನಿಗೆ ಕಚ್ಚಿ ಹಿಡಿದುಕೊಂಡು ಬಿಡ್ತು. ಏನೇ ಮಾಡಿದರು ಬಿಡಲೇ ಇಲ್ಲ. ಆಗಲೇ ಹಾವು ಬಂದು ಕಚ್ಚಿತು. ಮನುಷ್ಯ ಅಲ್ಲೇ ಶಿವನ ಪಾದಕ್ಕೆ ರವಾನೆಯಾದ. ಎರೆಹುಳ ತುಂಬಾ ಸುಸ್ತುಹೊಡೆದು ಹೋಗಿತ್ತು. ಅಲ್ಲೇ ಬರುತಿದ್ದ ನಾಯಿಯೊಂದು ಸತ್ತ ಮನುಷ್ಯನ ನೋಡಿ ಯಾರು ಇವನನ್ನ ಕೊಂದವರು ಎಂದು ಕೇಳಿತು. ಆಗ ಎರೆಹುಳ ಎದುಸಿರು ಬಿಡುತ್ತ ನಾನು ಮತ್ತು ಬುಸಪ್ಪ ಸೇರಿ ಕೊಂದೆವು ಅಂತು.

 ನಿಜವಾಗಿ ಬುಸಪ್ಪನ ವಿಷದಿಂದ ಅವನು ಸತ್ತಿದ್ದು. ಎರೆಹುಳ ಶ್ರಮ ಪಟ್ಟಿತ್ತು ನಿಜ, ಆದರೆ ಆ ಕೆಲಸದಲ್ಲಿ ಅದು ನಿಪುಣನಲ್ಲ. ಅದು ಮಾಡಿದ ಕೆಲಸಕ್ಕೆ ಬೆಲೆ ಇರಲಿಲ್ಲ. ಸರಳವಾಗಿ ಹೇಳುವುದಾದರೆ ಆಟಕ್ಕುಂಟು ಲೆಕಕ್ಕಿಲ್ಲ ಅವಸ್ಥೆ ಆಗಿತ್ತು ಎರೆಹುಳದ್ದು. ನಾನು ಕೊಟ್ಟೆ ಮಾಡುವುದರಲ್ಲಿ ನಿಪುಣನಾಗಿರಲಿಲ್ಲ, ಆ ಕೆಲಸ ನಂಗೆ ಹೊಸಾದಾಗಿತ್ತು. ಅಜ್ಜಿ ನನ್ನನ್ನ ಆಡ್ಕೊಂಡಿದ್ದರು. ನನ್ನ ಪ್ರಕಾರ ನಾನು ಶ್ರಮ ಪಟ್ಟಿದ್ದರೂ ಅಜ್ಜಿ ಪ್ರಕಾರ ನನ್ನ ಕೆಲಸಕ್ಕೆ ಬೆಲೆ ಇರಲಿಲ್ಲ. ಅದನ್ನು ಎಷ್ಟು ಚಂದವಾಗಿ ಬಣ್ಣ ಬಣ್ಣವಾಗಿ ಹೇಳಿ ಶಹಬ್ಬಾಸ್ ಎನ್ನುವಂತೆ ಬೆನ್ನಿಗೊಂದು ತಟ್ಟಿ ಹೇಳಿದ್ದರು ಎಂದೆನಿಸಿ ನಗು ಬಂತು. ಹಾಗು ಗಾದೆಯ ಸ್ವಾರಸ್ಯ ಹಾಗು ಅದರ ಹಿಂದಿನ ಕಥೆ ಕೇಳಿ ಖುಷಿಯಾಯಿತು. ಇನ್ನುಮೇಲೆ ಯಾರಾದರು ಕೆಲಸದಲ್ಲಿ ಪುಟ್ಟ ಸಹಾಯ ಮಾಡಿ ನಾನೇ ಮಾಡಿದ್ದು ಅಂತ ಬಡಾಯಿ ಕೊಚ್ಚುತಿದ್ದರೆ  "ಹುಂ ಗೊತ್ತು ಎರೆಹುಳ, ನೀನು ಮತ್ತು ಬುಸಪ್ಪ" ಅಂತ ಮನಸಿನಲ್ಲೇ ಅನ್ಕೊಂಡು ನಕ್ಕುಬಿಡಿ.



Friday, February 4, 2011

ಹುಡುಗ್ ಬುದ್ಧಿ

ಬಾಲ್ಕನಿಯಲ್ಲಿ ನಿಂತು ನಿತ್ಯ ನಿನ್ನ ನೋಡುವೆ...
ಮೆರೆ ಸಾಮ್ನೆವಾಲಿ ಕಿಡಕಿ ಮೇ ಎಂದು ಹಾಡುವೆ...
ದುಂಡು  ಮುಖ , ಇಲ್ಲ ಒಂದೂ ಮೊಡವೆ..
ಹೇ ಮಂದಸ್ಮಿತೆ ನಗುವೇ ನಿಂಗೆ ಒಡವೆ...

ನೀ ಕಾಣದಿದ್ದರೂ ಮನದಲ್ಲಿದೆ ನಿನ್ನ ಛಾಯ,
ಕನಸಿನಲ್ಲಿ ಕಂಡ ನೀನು, ಎದ್ದಾಗ ಮಾಯ..
ಮಾತಾಡುವ ಆಸೆ ಇದೆಯಾದರೂ ಏನೋ ಭಯ..
ಈ ಸಂಕಟಕ್ಕೆ ಕಾಣದಾಗಿದೆ ಉಪಾಯ..

ಅರ್ಥವಾಗಿದೆ ನನಗೀಗ ನರಿಯ ವ್ಯಥೆ...
ಕೈಗೆಟುಕದ ದ್ರಾಕ್ಷಿ ಹುಳಿಯೆಂದ ಕಥೆ...
ಸಿಗಲಾರೆ ಎಂದು ಸುರಿಸಲಾರೆ ಕಂಬನಿ..
ಏಕೆಂದರೆ  ಪಕ್ಕದಲ್ಲೇ ಇದೆ ಇನ್ನೊಂದು ಬಾಲ್ಕನಿ!!!