Sunday, March 4, 2012

ಮೂಗು...

   ಎಲ್ಲರದ್ದೂ ಒಂದೇ ಪ್ರಶ್ನೆ ರೀ..ಯಾಕೆ ಬ್ಲಾಗ್ ನಲ್ಲಿ ಏನೂ ಬರಿಯುತ್ತಿಲ್ಲ? ಬರಿಯುವುದು ನಿಲ್ಲಿಸಬೇಡಪ್ಪ..ಅಂತ. ಸರಿ ಇವತ್ತು ಭೂಮಿ ಆಕಾಶ ಒಂದಾದರು ಸರಿ ಏನೋ ಒಂದು ಬರೆದೇ ಮಲಗುವೆ ಎಂದು ಪಣ ತೊಟ್ಟೆ. ಸರಿನಪ್ಪ ಒಳ್ಳೇದೇ ಆದರೆ ಯಾವ ವಿಷಯದ ಮೇಲೆ ಬರಿಯಲಿ ಅನ್ನುವುದು ಕಾಡತೊಡಗಿತು. ದೇವರೇ ಒಂದು ವಿಷಯ ಹೊಳಿಯಲಪ್ಪ ಎಂದು ಕಣ್ಣು ಮುಚ್ಚಿದೆ. ಅದೇ ಕ್ಷಣ ಮೂಗು ತುರಿಸಲಾರಂಭಿಸಿತು. ಓ! ದೇವರೇ ವಿಷಯವನ್ನು ಆರಿಸಿದ್ದಾರೆ, ಸರಿ ನಿನ್ನಿಚ್ಛೆ ತಂದೆ ಅಂತ ಅದರ ಮೇಲೆಯೇ ಸುಮ್ನೆ ಹಿಂಗೆ ಬರಿಯೋಣ ಎಂದು ಪ್ರಾರಂಭಿಸುತ್ತಿರುವೆ.

    ಈ ಮೂಗು ಸಾಮಾನ್ಯ ಅಂಗ ಅಲ್ಲಾ ರೀ..ಇದರ ಬೆಲೆಯಾಗಲಿ, ಇದು ಎಷ್ಟು ಮುಖ್ಯ ಎಂದಾಗಲಿ ಬಹುಶಃ ಯಾರು ಯೋಚಿಸಿರುವುದಿಲ್ಲ. ಪ್ರಪ್ರಥಮವಾಗಿ ಮೂಗಿಲ್ಲದೆ ಮುಖದ ಅಂದ ಏನೂ ಇಲ್ಲ. ಯಾಕ್ರೀ ಆಶ್ಚರ್ಯ ಆಗಿಹೋಯಿತ? ನಮ್ಮ ಕವಿರತ್ನರು ಮೂಗನ್ನ ವರ್ಣಿಸಿಲ್ಲವೇ. ಸಂಪಿಗೆಯಂತ ಮೂಗು ಅಂತ. ಅಷ್ಟೇ ಯಾಕೆ, ತ್ರೇತಾಯುಗದಲ್ಲಿ ನಮ್ಮಣ್ಣ ಲಕ್ಷ್ಮಣ, ತಾನೇ ತ್ರಿಪುರ ಸುಂದರಿ ಎಂದು ಮೆರೆಯುತಿದ್ದ ರಾವಣನ ತಂಗಿ ಶೂರ್ಪನಖಿಯ ಮೂಗು ಮುರಿಯಲಿಲ್ಲವೇ? ಅದು ಅವಳ ಅಂದ ಹಾಳಾಗಲಿ ಎಂದು. ಇನ್ನೂ ಹೇಳುವುದಾದರೆ ನಮ್ಮ ಅಂದಗಾತಿಯರು ಚಿತ್ರತಾರೆಯರು ಎಷ್ಟೋ ಜನ ತಮ್ಮ ಮೂಗು ಸರಿಯಿಲ್ಲ ಎಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತಮ್ಮ ರೂಪ ಹೆಚ್ಚಿಸಿಕೊಂಡಿಲ್ಲವೇ. ಆದುದರಿಂದ ನಿಮ್ಮ ಮೂಗಿನ ಮೇಲೆ ಒಂದು ಕಣ್ಣು ಯಾವಾಗಲೂ ಇರಲಿ. (ನಮ್ಮ ಎರಡೂ ಕಣ್ಣು ಮೂಗಿನ ಮೇಲೆ ಇರುವುದು ಕಾಕತಾಳೀಯ ಅಲ್ಲವೇ!!)

   ಇನ್ನು ನಿಮ್ಮ ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ ಮೂಗು ಮನೆಯ ಕಿಟಕಿಯಂತೆ.ಉಸಿರಾಟ ಪ್ರಾರಂಭ ಆಗುವುದೇ ಇಲ್ಲಿಂದ ತಾನೇ. ಒಳಗೆ ಹೋಗುವ ವಾಯುವಿನ ಶುದ್ಧತೆ ಕಾಪಾಡುವುದು ಮೂಗಿನೊಳಗಿನ ರೋಮ. ಇನ್ನು ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಖಾಯಿಲೆ ನೆಗಡಿ, ಅದೂ ಮೊದಲು ಆಕ್ರಮಿಸುವುದು ಮೂಗನ್ನೇ. ಮೂಗಲ್ಲಿರುವ ವಾಸನೆ ಗ್ರಹಣ ಶಕ್ತಿಯಂತೂ ಬೇಕೇ ಬೇಕು. ಈ ನೆಗಡಿ ಆದಾಗ ಇದಿಲ್ಲದೆ ಪಡೋ ಗೋಳು ಯಾವನಿಗೂ ಬೇಡ ಕಣ್ರಿ. ಇದರಿಂದ ಬಾಯಿ ರುಚಿಗೂ ಪೆಟ್ಟು. ನಮ್ಮ ಮೂಗು ಸಾಮಾನ್ಯ ಅಲ್ಲಾ ಅಂತ ಈಗ ಅನಿಸುತ್ತಿರಬೇಕಲ್ಲ. ಮೂಗಿಲ್ಲದೆ ಪ್ರಾಣಾಯಾಮ ಹೆಂಗ್ರೀ ಮಾಡಲು ಸಾಧ್ಯ. ಹಾಗಾಗಿ ನಮ್ಮ ಋಷಿಗಳ ಸಾಧನೆಯಲ್ಲಿ ಮೂಗಿನ ಪಾಲೂ ಇದೆ.

   ಮೂಗಿನ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಸಾಹಿತ್ಯದಲ್ಲೂ ಮೂಗಿನ ಬಳಕೆಯಾಗುತ್ತದೆ. ಕಿರಿಯರ ಬುದ್ಧಿವಂತಿಕೆ ನೋಡಿ ಹಿರಿಯರು ತಮ್ಮ ಮೂಗಿನ ಮೇಲೆ ಬೆರಳಿಟ್ಟರು ಎಂದರೆ ಆಶ್ಚರ್ಯಚಕಿತರಾದರು ಎಂದರ್ಥ. ಇನ್ನು ಈ ಹಾಳು ಜನರ ಅತ್ಯಂತ ಪ್ರಿಯವಾದ ಚಟ ನಿಮಗೆಲ್ಲ ತಿಳಿದಿದೆ ಅಲ್ಲವೇ. ಬೇರೆಯವರ ವಿಚಾರದಲ್ಲಿ ಮೂಗು ತೂರಿಸುವುದು. ಒಬ್ಬಾಕೆ ಓರ್ವ ಹುಡುಗನ ಜೊತೆ ಅಂಗಡಿಗೆ ಹೋದಳಂತೆ. ಅದನ್ನು ನೋಡಿದ ಇನ್ನೊಬ್ಬ "ಬುದ್ಧಿವಂತ" ಮರುದಿನ ಆ ಹುಡುಗನಿಗೆ ಕರೆ ನೀಡಿ "ಏನೋ ಮಗ, ನಿಮ್ಮಿಬ್ಬರ ಮಧ್ಯ ಏನ್ ನಡೀತಿದೆ? ನೆನ್ನೆ ನಾನ್ ನಿಮ್ಮಿಬ್ರನ್ನ ಜೊತೆಯಾಗಿರೋದು ನೋಡ್ದೆ". ಅಲ್ಲಾ ರೀ, ಅವರಿಬ್ಬರೂ ಏನು ಮಾಡಿದರೆ ಇವನ ಘಂಟು ಹೋಗುವಂತದ್ದೇನು? ಜನ ಸುಮ್ಮನೆ ಬೇರೆಯವರ ವಿಷಯದಲ್ಲಿ ಅನಾವಶ್ಯಕ ಆಸಕ್ತಿ ತೋರಿಸುವುದು ಅಂದರೆ ಮೂಗು ತೂರಿಸುವುದು ಅಂತ. ಇನ್ನೊಂದು ಪ್ರಸಿದ್ದ ಬಳಕೆ ನಾಯಿ ಮೂಗು. ಯಾರಾದರು ಸ್ವಲ್ಪ ಜಾಸ್ತಿಯೇ ಚುರುಕಿದ್ದು ಅವರ ಗ್ರಹಣ ಶಕ್ತಿ ಚೆನ್ನಾಗಿದ್ದು, ಸೂಕ್ಷ್ಮ ವಿಷಯಗಳನ್ನ ಸುಳಿವೇ ಇಲ್ಲದೆ ಕಂಡು ಹಿಡಿಯುವವನಾದಲ್ಲಿ  ಅವನ ಮೂಗು ನಾಯಿ ಮೂಗು (ಪಾಪ). ಈ ವಾಸನೆ ಗ್ರಹಿಸುವ ಶಕ್ತಿ ಚೆನ್ನಾಗಿದ್ದರು ಇದೆ ಬಿರುದು.

   ಹೀಗೆ ಮೂಗು ಒಂದು ಪುಟ್ಟ ಅಂಗವಾದರು ನಮ್ಮ ದೈನಂದಿನ ಬದುಕಿನಲ್ಲಿ ಬಹಳ ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದೆ. ಇಲ್ಲಿಗೆ ನನ್ನ "ಮೂಗು ಮಹಾತ್ಮೆ"ಯನ್ನು ಮುಗಿಸುತ್ತಿದ್ದೇನೆ. ಇದನ್ನ ಬರೆದವರಿಗೂ,ಓದಿದವರಿಗೂ, ಓದಿದವರ ಮೂಲಕ ತಿಳಿದುಕೊಂಡವರಿಗೂ ದೇವರು ಒಳ್ಳೆ ಸಂಪಿಗೆಯಂತ ನಾಯಿ ಮೂಗನ್ನು ಕೊಟ್ಟು, ಬೇರೆಯವರ ವಿಷಯದಲ್ಲಿ ತೂರಿಸದಂತೆ ಕಾಪಾಡಲಿ.ಇಷ್ಟೆಲ್ಲಾ ಓದಿದ ಮೇಲೆ ಮೂಗಿನ ಮೇಲೆ ಖಂಡಿತ ಬೆರಳನ್ನಿಡುವಿರಿ ಎಂದುಕೊಂಡು ನಿದ್ರಾದೇವಿಯ ಪಾದಕ್ಕೆ ಶರಣಾಗುತ್ತೇನೆ.