Sunday, September 8, 2013

ದೇವರು ಮತ್ತು ಹರಕೆ!!

   ನಾನೊಬ್ಬ ನಾಸ್ತಿಕನು ಅಲ್ಲಾ ಅಂಧ ಅನುಚಾರಿ ಭಕ್ತನು ಅಲ್ಲಾ. ದೇವರು ಇದ್ದಾನೆ ಅಂತ ಹೇಳುವುದಕ್ಕೆ ನನ್ನಲ್ಲಿ ಪುರಾವೆಗಳಿಲ್ಲವಾದರೂ, ಇಲ್ಲ ಎಂದು ಹೇಳುವುದಕ್ಕೆ ಮನಸಾಕ್ಷಿ ಒಪ್ಪುತ್ತಿಲ್ಲ. ಆದರೆ ದೇವರ ಬಗ್ಗೆ ನನ್ನ ಪರಿಕಲ್ಪನೆ ಹಾಗೂ ಕೆಲವು ಯೋಚನೆಗಳ ಬಗ್ಗೆ ನಾನು ಹಂಚಿಕೊಳ್ಳುವುದಕ್ಕೆ ಇಷ್ಟ ಪಡುತ್ತೇನೆ.ನೀವು ಇದನ್ನು ಹಾಸ್ಯ ಅಂತೀರೋ ಅಥವಾ ಆಧ್ಯಾತ್ಮಿಕ ತರ್ಕ ಅಂತೀರೋ ನಿಮಗೆ ಬಿಟ್ಟಿದ್ದು.

  ನಾನು ಬಾಲ್ಯದಿಂದಲೂ ನೋಡುತ್ತಾ ಬಂದಿರೋ ಒಂದು ವಿಚಿತ್ರ ಆಚರಣೆ  ಎಂದರೆ ಈ ಹರಕೆ ಹೇಳಿಕೊಳ್ಳುವುದು. ಇದರಿಂದ ಎಷ್ಟೋ ಮಂದಿಗೆ ಇಷ್ಟಾರ್ಥ ಸಿದ್ದಿ ಆಗಿವೆ. ಆದರೆ ದೇವರು ನಮ್ಮ ರಾಜಕಾರಣಿ ಪುಡಾರಿಗಳಂತೆ ಲಂಚಕೋರನ? "ನನಗೆ 108 ತೆಂಗಿನ ಕಾಯಿ ಕೊಟ್ಟರೆ ನಿನಗೆ ಪರೀಕ್ಷೆಯಲ್ಲಿ 108 Marks ಕೊಡುತ್ತೇನೆ" ಅಂತ ಹೇಳೋಕ್ಕೆ? ಅದು ಏನಿದ್ದರೂ ಮನುಷ್ಯನ ಬುದ್ಧಿ. ದೇವರೆಂಬ ಪರಿಕಲ್ಪನೆಯನ್ನು ಸೃಷ್ಟಿ ಮಾಡಿರುವುದು ಮನುಷ್ಯ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಅಥವಾ ಈ ಹರಕೆ ಹೇಳಿಕೊಳ್ಳುವುದನ್ನು ಶುರು ಮಾಡಿದ ಪುಣ್ಯಾತ್ಮ ದೊಡ್ಡ ಲಂಚಕೋರ ಆಗಿದ್ದ ಅನಿಸುತ್ತೆ.

  ಆದರೂ ಈ ಹರಕೆ ಹೆಚ್ಚಿನವರಿಗೆ ಫಲಕಾರಿಯಾಗುತಲ್ಲಾ? ಅಂತ ನೀವು ಕೇಳಬಹುದು. ಇದಕ್ಕೆ ಹಲವಾರು ತಾರ್ಕಿಕ ಕಾರಣಗಳನ್ನು ಕೊಡಬಹುದು. ಮೊದಲನೇಯದಾಗಿ ಈ ಮನುಷ್ಯರಿಗೆ ತಮ್ಮ ಮೇಲೆ ನಂಬಿಕೆ ಕಡಿಮೆ. ಆತ್ಮವಿಶ್ವಾಸವು ಇರುವುದಿಲ್ಲ. ನನ್ನಿಂದ ಇದು ಸಾಧ್ಯ ಅಂತ ಗಟ್ಟಿ ಮನಸ್ಸು ಮಾಡುವುದಕ್ಕಿಂತ ಯಾರೋ ದೇವರು ಅನ್ನೋ ಪವಾಡ ಪುರುಷ ನನ್ನ ಕೈಯ್ಯಲ್ಲಿ ಮಾಡಿಸುತ್ತಾನೆ ಅಂತ ನಂಬುವುದು ಸುಲಭ. ಒಟ್ಟಿನಲ್ಲಿ ಮನಸ್ಸಿನ ಒಳಗೆ ಧನಾತ್ಮಕ(positive) ಭಾವನೆ ಅಭಿವ್ರದ್ಧಿಯಾಗುವುದು ಮುಖ್ಯ.

  ಇನ್ನೊಂದು ದೃಷ್ಟಿಯಿಂದ ನೋಡಿದರೆ ಕೆಲವು ಹರಕೆಯಿಂದ ಶಿಶ್ತು ಶ್ರದ್ದೆ ಹೆಚ್ಚಾಗಿ, ಇದರಿಂದ ಮಾಡುವ ಕಾರ್ಯದಲ್ಲಿ ಏಕಾಗ್ರತೆಯೂ ಜಾಸ್ತಿಯಾಗಿ ಒಳ್ಳೆ ಫಲ ಪ್ರಾಪ್ತಿಯಾಗಬಹುದು. ಒಬ್ಬ ವಿದ್ಯಾರ್ಥಿ ಪರೀಕ್ಷೆಗಾಗಿ ದಿನಾ ಬೆಳ್ಳಿಗ್ಗೆ ಎದ್ದು ಸ್ನಾನ ಮಾಡಿ 108 ಗಾಯತ್ರಿ ಜಪ ಮಾಡುತ್ತೇನೆ ಅಂತ ಹರಕೆ ಹೇಳಿಕೊಂಡರೆ, ಇದರಿಂದ ಬೆಳ್ಳಿಗೆ ಬೇಗ ಎದ್ದು, ಸ್ನಾನ ಮಾಡಿ ತಾಜಾ ಉತ್ಸಾಹದಿಂದ  ಓದಿದರೆ ನಿಜವಾಗಲು ಒಳ್ಳೆ ಅಂಕ ಪಡೆಯುತ್ತಾನೆ. ಹರಕೆ ಅಷ್ಟೊಂದೇನು ಮೂಢ ಅಲ್ಲ ಅಲ್ವ!?

  ಆದರೆ ಈ ಹರಕೆಗಳಿಗೆ ಮೂರನೆಯ ಮುಖವೊಂದಿದೆ. ನನಗೆ ಮನುಷ್ಯರ ಅಲ್ಪತನ ಕಣ್ಣಿಗೆ ಕುಕ್ಕುವುದು ಯಾವಗವೆಂದರೆ  ಈ ಹರಕೆ ಸರಿಯಾಗಿ ತೀರಿಸದಿದ್ದರೆ ದೇವರು ಕೋಪ ಮಾಡಿಕೊಂಡು ನಮಗೆ ಕೆಡುಕನ್ನು ಮಾಡುತ್ತಾನೆ ಅಂದಾಗ!! ಅಲ್ಲಾರಿ ನಮಗೆ ಕೆಡುಕನ್ನು ಮಾಡುವುದಾದರೆ ದೇವರು ಎಂಬ ಹೆಸರೇಕೆ ಕೊಡ್ತೀರ? ಅಥವಾ ನಮ್ಮ ಸರಕಾರೀ ಅಧಿಕಾರಿಗಳ ತರಹನ ದೇವರು? ಲಂಚ ಕೊಡಲಿಲ್ಲ ಅಂತ ಕೇಡು ಬಗೆಯೋದಕ್ಕೆ? ದೇವರು ನಮ್ಮ ಹಾಗೆ ಲೆಕ್ಕ ಇಟ್ಟುಕೊಳ್ಳುವುದಿಲ್ಲ ಮಾರೆಯರೇ..ನಾವೆಲ್ಲಾ ದೇವರ ಮಕ್ಕಳು ಎಂಬುವುದನ್ನು ನೀವು ನಂಬುತ್ತೀರಾ ಅಂತಿದ್ದರೆ, ದೇವರು ಹೇಗೆ ನಮಗೆ ಕೆಟ್ಟದನ್ನು ಮಾಡಲು ಸಾಧ್ಯ? ನೀವು ತಪ್ಪು ಮಾಡಿದರೆ ಶಿಕ್ಷೆ ಕೊಡಬಹುದು ನಮ್ಮ ಪೋಷಕರಂತೆ. ಆದರೆ ಲಂಚ ಕೊಡಲಿಲ್ಲ ಅಂತ ಶಿಕ್ಷಿಸುವುದಿಲ್ಲ.

  ಒಟ್ಟಿನಲ್ಲಿ ಹರಕೆ ಎನ್ನುವುದು ಕೇವಲ ಬರಡು ಆಚರಣೆ ಅಲ್ಲದಿರಬಹುದು. ನಿಮ್ಮ ಶ್ರದ್ದೆ ಆತ್ಮವಿಶ್ವಾಸ ಹೆಚ್ಚಿಸುವುದಕ್ಕೆ ಒಂದು ಮಾರ್ಗ ಅಷ್ಟೇ. ಆದರೆ ಯೋಚಿಸಿ ಹರಕೆ ಹೇಳಿಕೊಳ್ಳಿ, ಅದನ್ನು ಬಿಟ್ಟು ಏನೋ ಅರ್ಥವೇ ಇಲ್ಲದೆ ದುಡ್ಡು ಹಾಳು ಮಾಡುವಂತ ಹರಕೆ ಹೇಳಿಕೊಳ್ಳಬೇಡಿ. ಸುಮ್ಸುಮ್ನೆ 108 ಕಾಯಿ, ಲೋಟಗಟ್ಟಲೆ ಹಾಲು ನೀರುಪಾಲು ಮಾಡಬೇಡಿ. ಹಾಗೆ ಮಾಡಿಯೂ ಕೆಲಸ ಆಗಲಿಲ್ಲ ಅಂತ ದೇವರ ಬೈಯ್ಯಲೂ ಹೋಗಬೇಡಿ.

 ಹೀಗೆ ನನ್ನ ಒಂದು ದೃಷ್ಟಿಕೋನ ನಿಮ್ಮ ಮುಂದೆ ಇಟ್ಟಿದ್ದೀನಿ. ಇದನ್ನು ಓದಿ ನಿಮಗೆ ಏನಾದರು ಪ್ರಶ್ನೆ ಮೂಡಿದರೆ ಕೇಳಿ. ಆದರೆ ಯಾರಿಗಾದರು ಕೋಪ ಬಂದರೆ ನನ್ನ ತಲೆ ಮೇಲೆ ಎರಡು ತೆಂಗಿನಕಾಯಿ ಒಡಿಯುತ್ತೀರಂತ ಹರಕೆ ಮಾತ್ರ ಹೇಳಿಕೊಳ್ಳಬೇಡಿ :P